ಮೂರು ಪಂಚಾಂಗಗಳು ಪಾಲಹಳ್ಳಿ ವಿಶ್ವನಾಥ್ Palahalli Vishwanath

 

ಮೂರು ಪಂಚಾಂಗಗಳು

ಪಾಲಹಳ್ಳಿ ವಿಶ್ವನಾಥ್

ಅಲ್ಲ,ನನ್ನಂತಹವನು , ಹತ್ತು ಮಕ್ಕಳ ತಂದೆ, ದಿನ ಪತ್ರಿಕೆಗಳನ್ನು ಮಾರುತ್ತಿದ್ದವನು , ಈಗ ಈ ತರಹ ಕದ್ದು ಅಶ್ಲೀಲ ಪುಸ್ತಕಗಳನ್ನು ಏಕೆ ಮಾರುತ್ತಿದ್ದಾನೆ ಎಂದು ನಿಮಗೆ ಕುತೂಹಲವಿರಬೇಕಲ್ಲ್ವೇ? ನನ್ನ ಜೀವನಾನೇ ಬದಲಾಯಿಸಿಹೋಯಿತು ! ಎಲ್ಲಾ ಆ ಮಿಲಿಟರಿಯವನಿಂದ ! ಹಾಳಾಗಿಹೋಗಲಿ ಅವನು! ಇದೆಲ್ಲ ಬಹಳ ಹಿಂದೆ ನಡೆದಿದ್ದು. ಈಗ ಆ ಸೇನಾಪತಿ ಎಲ್ಲಿದ್ದಾನೋ ಗೊತ್ತಿಲ್ಲ. ದಿನಪತ್ರಿಕೆಗಳನ್ನು ಮಾರುವವನಿಗೂ ಸೇನಾಪತಿಗೂ ಎನು ಸಂಬಂಧ ಅಂತ ಕೇಳ್ತಾ ಇದ್ದೀರಲ್ಲವೆ? ಸಾವಧಾನ.

ಬಹಳ ಹಿಂದಿನ ಕಥೆ ಇದು. ಆಗಿನ ರಷ್ಯದಲ್ಲಿ , ನಾವು ಯಹೂದಿಗಳು ಯಾರಿಗೂ ಹೆದರಿಕೊಳ್ತಾ ಇರಲಿಲ್ಲ. ಆಗೆಲ್ಲ ನಾನು ಈ ದೊಡ್ಡ ನಗರದ ಮೊಹಲ್ಲಾನಲ್ಲಿ ದಿನಾ ಪತ್ರಿಕೆ ಮಾರ್ತಾ ಇದ್ದೆ. ಆಗೆಲ್ಲ ಇಷ್ಟು ದಿನಪತ್ರಿಕೆಗಳಿರಲಿಲ್ಲ . ಪತ್ರಿಕೆಗಳಲ್ಲದೆ ನಾನು ಶ್ಲೋಕದ ಪುಸ್ತಕಗಳನ್ನು ಮಾರ್ತಾ ಇದ್ದೆ. ಯೆಹೂದೀ ಪಂಚಾಗಗಳು ಕೂಡ. ನಮ್ಮ ಮೊಹಲ್ಲಾನ ಅಂಗಡಿಬೀದಿಗೆ ಹೋದರೆ ನನ್ನ್ನ ಸಾಮಾನುಗಳು ಎಲ್ಲಾ ಖರ್ಚಾಗಿ ಹೋಗ್ತಿದ್ವು.

ಆಗ ನಾನು ಪಂಚಾಂಗಗಳನ್ನು ಮಾರ್ತಿದ್ದೆ ಅಲ್ವಾ. ವರ್ಷ ಪ್ರಾರಂಭ ಆಗೋ ಮೊದಲು ಸಾಮಾನ್ಯವಾಗಿ ನೂರು ಖರೀದಿಸಿ ಅವೆಲ್ಲವನ್ನ ಮಾರ್ತಿದ್ದೆ. ಆದರೆ ಒಂದು ಸತಿ ಏನಾಯ್ತು ಅಂದರೆ ವರ್ಷ ಶುರುವಾಗಿ ಮೂರು ತಿಂಗಳಾದರೂ ನನ್ನ ಹತ್ತಿರ ಮೂರು ಪಂಚಾಂಗಗಳು ಖರ್ಚಾಗಿರಲಿಲ್ಲ, ಉಳಿದುಕೊಂಡುಬಿಟ್ಟಿದ್ದವು. ಒಂದಲ್ಲ,ಎರಡಲ್ಲ,ಮೂರು! ಹೇಗೆ ಇವನ್ನು ಮಾರುವುದು ? ಈಗಲೇ ಕಷ್ಟ, ಮುಂದೆ ಯಾರು ತೊಗೋತಾರೆ? ಈ ಮೊಹಲ್ಲದವರೆಲ್ಲಾ ಆಗಲೇ ತೊಗೊಂಡುಬಿಟ್ಟಿದಾರೆ. ಅವರ್ಯಾಕೆ ಎರಡನೆಯದು ತೊಗೋತಾರೆ?

ಹೀಗೇ ಅಂಗಡಿಬೀದೀಲಿ ಓಡಾಡ್ತಾ ಇದ್ದಾಗ ಒಬ್ಬ ಮಿಲಿಟರಿಯವನು ಕಾಣಿಸಿದ, ಅನೇಕ ಪದಕಗಳಿದ್ದವು ಅವನ ಎದೆಯ ಮೇಲೆ . ಸೇನಾಪತಿ ಇರಬೇಕಲ್ವಾ? ಅಲ್ಲಿ ಒಂದು ಕೆಫೆಯ ಹೊರಗಡೆ ಕಾಫಿ ಕುಡೀತಾ ಕುಳಿತಿದ್ದ. ಹಾಗೇ ಅಲ್ಲಿ ಇದ್ದ ಸೇವಕನೊಬ್ಬನಿಗೆ ಏನೋ ಜೋರಾಗಿ ಹೇಳುತ್ತಿದ್ದ. ನೆನಪಿಟ್ಕೊ ! ನಮ್ಮ ಮನೆ ಇರುವುದು 3ನೇ ಕ್ರಾಸಿನಲ್ಲಿ 6 ನೆ ನಂಬರ್ ! ನನ್ನ ಹೆಂಡತಿಗೆ ಹೇಳಬೇಕು ಪುಷ್ಕಿನ್ ರಾಯರು ರಾತ್ರಿ ಭೋಜನಕ್ಕೆ ಬರ್ತಿದಾರೆ ಅಂತ. ತಿಳೀತ.” ಸೇನಾಪತಿ ಹೀಗೆಯೇ ಕೂಗ್ತಾ ಇದ್ದ. ಆ ಸೇವಕ ಅರ್ಥಆಯಿತು ಎಂದರೂ ಮೂರುನಾಲ್ಕು ಬಾರಿ ಸೇನಾಪತಿ ಹೇಳಿದ್ದನ್ನೇ ಹೇಳ್ತಾ ಇದ್ದ: “ 3ನೆ ಕ್ರಾಸ್, 6ನೆ ನಂಬರು, ಪುಷ್ಕಿನ್ ರಾಯರು”

ಸರಿ, ಸೇನಾಪತಿ ಮತ್ತೆ ಕಾಫಿ ಕುಡಿಯಲು ಶುರುಮಾಡಿದ. ನಾನು ಅಲ್ಲೇ ನಿಂತಿದ್ದನ್ನು ದುರುಗುಟ್ಟಿಕೊಂಡು ನೋಡಿದ . ಸ್ವಲ್ಪ ಹೆದರಿದೆ, ಆದರೂ ಅಲ್ಲೇ ನಿಂತಿದ್ದೆ.

ನೀನು ಏನಯ್ಯಾ ಹೋಗತಾನೇ ಇಲ್ಲ. ಏನು ಬೇಕು ನಿನಗೆ “

ಸೇನಾಪತಿಯವರೆ ! ಒಂದು ಯಹೂದಿ ಪಂಚಾಂಗ ತೆಗೆದುಕೊಳ್ಳಿ”

ನಾನು ಎನು ಮಾಡಲಯ್ಯ ನಿನ್ನ ಯಹೂದಿ ಪಂಚಾಂಗ ಇಟ್ಟುಕೊಂಡು? ನಾನು ಯಹೂದಿ ಅಲ್ಲ, ಗೊತ್ತಾಗುತ್ತಲವ? ಅದೂ ವರ್ಷ ಶುರುವಾಗಿ 3 ತಿಂಗಳಾದವು”

ಇನ್ನೂ 9 ತಿಂಗಳುಗಳಿವೆ. ಎಲ್ಲಾ ಹಬ್ಬಗಳೂ ಇವೆ. ಯಹೂದೀ ಹಬ್ಬಗಳು.”

ಯಹೂದಿ ಹಬ್ಬ ತೊಗೊಂಡು ನಾನೇನು ಮಾಡಲಿ? ಹೋಗು ಹೋಗು”

ತೊಗೋಳಿ ಸಾರ್, ಮನೇಲಿ ಮಕ್ಕಳಿದಾರೆ. ಹಣ ಬೇಕು”

ಹೋಗು, ಹೋಗು “

ಇದೂ ಪ್ರಯತ್ನಿಸಿಬಿಡೋಣ ಅಲ್ಲವೇ ?

ನೀವು ಪಂಚಾಂಗ ತೊಗೊಳ್ಳದಿದ್ರೂ ಪರವಾಗಿಲ್ಲ, ಸಾರ್! ನಿಮ್ಮನ್ನು ನೋಡುವುದೇ ಖುಷಿ ! ದೇಶಕ್ಕಾಗಿ ಎಷ್ಟು ಹೋರಾಡಿದ್ದೀರಿ !.. ನಾನು ಬರ್ತೀನಿ”

ಸ್ವಲ್ಪ ದೂರ ಹೋಗುವುದಲ್ಲೇ ‘ ಬಾ ಇಲ್ಲಿ ‘ ಎಂದು ಕೇಳಿಸಿತು. ನೋಡಿದರೆ ಅದೇ ಸೇನಾಪತಿ. ‘ ಸರಿ, ಒಂದು ಪಂಚಾಂಗ ಕೊಡು’ ಅಂದರು. ಹಣಕ್ಕೆ ಚೌಕಾಶಿ ಏನೂ ಮಾಡಲಿಲ್ಲ. ಏನೂ ಮಾತು ಆಡಲಿಲ್ಲ. ಇಂತಹವರು ಎಲ್ಲಿ ಸಿಗ್ತಾರೆ! ನಾನು ಸ್ವಲ್ಪ ಜಾಸ್ತೀನೇ ಕೇಳಿದ್ದೆ. ಆದರೂ ಸೇನಾಪತಿ ಏನೂ ಹೇಳಲಿಲ್ಲ. ನಮಸ್ಕಾರ ಹೇಳಿ ಈ ಕಡೆ ಹೊರಟೆ.

ಇನ್ನೂ ಎರಡು ಪಂಚಾಂಗ ಉಳಿದುಕೊಂಡಿದೆಯಲ್ಲಾ? ಏನು ಮಾಡುವುದು ? ಮತ್ತೆ ಆ ಸೇನಾಪತಿಯ ಹತ್ತಿರವೆ ಹೋಗಲೇ? ಏನೋ ಒಂದು ಸತಿ ಕರುಣೆಯಿಂದ ತೆಗೆದುಕೊಂಡ. ಪಾಪ,ಒಂದು ಯಹೂದಿ ಪಂಚಾಗವೇ ಸಾಕು ಅವನಿಗೆ. ಇನ್ನು ಎರಡು ತೊಗೋತಾನಾ? ಹಾಗೇ ಯೋಚಿಸುತ್ತಿದ್ದಾಗ ಒಂದು ಒಳ್ಳೆಯ ಆಲೋಚನೆ ಬಂದಿತು. ಆ ಸೇನಾಪತಿ ಹೇಳುತ್ತಿದ್ದ ಅವನ ಮನೆಯ ವಿಳಾಸ ನೆನಪಿಗೆ ಬಂದಿತು ‘ 3ನೆಯ ಕ್ರಾಸ್, 6ನೆಯ ಮನೆ “ ಅಂಗಡಿ ಬೀದಿಯಿಂದ ಓಡಿದೆ. ಮೂರನೇ ಕ್ರಾಸೂ ಸಿಕ್ತು. ಮನೇನೂ ಸಿಕ್ತು .ವಾವ್! ಬಹಳ ಚೆನ್ನಾಗಿದೆ ಎಂದುಕೊಂಡೆ..

ಮನೆ ಮುಂದೆ ಇದ್ದ ಗಂಟೆಯನ್ನು ಒತ್ತಿದೆ. ಯಾರೂ ಬರಲಿಲಲ್ಲ. ಯಾರಾದರೂ ಸೈನಿಕ ಬಂದು ನನ್ನ ಹೊಡೆದು ಓಡಿಸಿದರೆ? ಮತ್ತ ಒತ್ತಿದೆ. ಯಾರೂ ಬರಲಿಲ್ಲ. ಏನು ಮಾಡೋಣ ಅಂತ ಯೋಚಿಸುತ್ತಿದ್ದಾಗ, ಬಾಗಿಲು ತೆಗೀತು. ಕೆಲಸದವಳು ಅಂತ ಕಾಣಿಸ್ತು; ಕೈನಲ್ಲಿ ಪರಕೆ ಇಟ್ಟುಕೊಂಡಿದ್ದಳು.ಹೊಡೆಯೋಹಂಗೇ ಕಾಣಿಸಿದಳು ಸೇನಾಪತಿಯವರ ಪತ್ನಿಯನ್ನು ನೋಡಬೇಕು ಎಂದು ಹೇಳಿದೆ. ಪರಕೆ ನೋಡಿದರೆ ಭಯವೇ ಆಗ್ತಿತ್ತು. ಆಕೆ ಹಾಗೇ ನನ್ನ ಒಂದು ನಿಮಿಷ ನೋಡಿ ಬಾಗಿಲು ಮುಚ್ಚಿದಳು. ಸರಿ, ಹೋಗೋಣ ಎಂದುಕೊಂಡಾಗ ಶಬ್ದ ಆಯಿತು. ಮನೆ ಬಾಗಿಲು ತೆಗೆಯಿತು. ಒಬ್ಬ ಸುಂದರ ಯುವತಿ ನಿಂತಿದ್ದಳು .ಸೇನಾಪತಿಯ ಹೆಂಡತಿಯೇ ? ಇಲ್ಲ, ಈಕೆ ಇನ್ನೂ ಚಿಕ್ಕವಳು. ಸೇನಾಪತಿಯ ಮಗಳೆ? ಇಲ್ಲ, ಅವನಿಗೆ ಅಷ್ಟು ವಯಸ್ಸಾಗಿರಲಿಲ್ಲ. ಈ ತರಹ ಆಲೋಚನೆಯಲ್ಲಿದ್ದಾಗ ಅಕೆ “ ಏನ ಬೇಕು ನಿಮಗೆ ?” ಎಂದಳು. ಅವಳನ್ನು ಹೇಗೆ ಸಂಬೋಧಿಸಬೇಕೋ ಗೊತ್ತಾಗಲಿಲ್ಲ. “ ಏನಿಲ್ಲ. ಅಂಗಡಿಬೀದಿಯಲ್ಲಿ ಸೇನಾಪತಿಯವರು ಸಿಕ್ಕಿದ್ದರು. ನನ್ನ ಹತ್ತಿರ ಪಂಚಾಂಗ ಇರೋದು ನೋಡಿದರು. ಒಂದು ಪಂಚಾಗಾನ ಮನೇಗೆ ಕೊಟ್ಬಿಡು. ಅವರು ದುಡ್ಡು ಕೊಡ್ತಾರೆ. ಅದಲ್ಲದೆ ಮುಷ್ಕಿನ್ ರಾಯರು ರಾತ್ರಿ ಭೋಜನಕ್ಕೆ ಬರ್ತಾರೆ ಅಂತ ನಿಮಗೆ ಹೇಳಿ ಅಂದರು” “ ಮುಷ್ಕಿನ್ ರಾಯರು ಅಲ್ಲ. ಪುಷ್ಕಿನ್ ರಾಯರು “ ಎಂದು ನಕ್ಕಳು. ಆಕೆ ನಗೋದು ನೋಡಿ ನನಗೂ ಆರಾಮ ಎನ್ನಿಸಿತು “ ಎಲ್ಲಿ ಪಂಚಾಂಗ ಕೊಡಿ, ಎಷ್ಟು ದುಡ್ಡು?” ನಾನು ಹೇಳಿದಾಗ, ಮತ್ತ ನಗೆ ಬೀರಿ ಒಳಗೆ ಹೋಗಿ ಹಣ ತಂದುಕೊಟ್ಟಳು. ವಿದಾಯ ಹೇಳಿ ಬಾಗಿಲು ಹಾಕಿಕೊಂಡಳು. ಸಿಕ್ಕಿದರೆ ಈ ತರಹ ಗಿರಾಕಿ ಸಿಗಬೇಕು ಎಂದು ಕೊಂಡೆ. ಅಂತೂ ಎರಡು ಪಂಚಾಗಗಳ್ನು ಮಾರಿಯಾಯಿತು

ಕಡೆಗೂ ಒಂದು ಪಂಚಾಂಗ ಉಳಿದುಕೊಂಡಿತು. ಮತ್ತೆ ಸಂಜೆ ಅಂಗಡಿಬೀದಿಗೆ ಹೋದೆ. ದೂರದಲ್ಲಿ ಒಬ್ಬ ಮಿಲಿಟರಿಯವನು. ಸುಮಾರು ಪದಕಗಳು ಎದೆಯ ಮೆಲೆ. ಸದ್ಯ , ಕಡೆಯ ಪಂಚಾಂಗವನ್ನೂ ಮಾರಬಹುದು. ಆದರೆ ಓ ! ಅವನೇ ! ಅದೇ ಆ ಪದಕಧಾರಿ ಹಳೆಯ ಸೇನಾಪತಿ ! ಅವನೂ ನನ್ನನ್ನು ಗುರುತಿಸಿರಬೇಕು ಏಕೆಂದರೆ ನನ್ನನ್ನು ಕರೆಯುತ್ತಿದ್ದಾನೆ.ಏನು ಮಾಡೋಣ! ಸಿಕ್ಕಿ ಹಾಕಿ ಕೊಂಡುಬಿಟ್ಟೆನಲ್ಲ. ಸರಿ, ಓಡಲು ಶುರುಮಾಡಿದೆ. ಜೋರಾಗಿಯೇ ಓಡಿದೆ. ಅದರೆ ಯಾರೋ ನನ್ನನ್ನು ಕರೆಯುತ್ತಿದ್ದಾರಲ್ಲ! ನಿಲ್ಲಿ, ನಿಲ್ಲಿ ಎಂದು ಕೂಗುತ್ತಿದ್ದಾರೆ ! ಯಾರಿರಬಹುದು? ಆ ಸೇನಾಧಿಪತಿ ಇರಬಹುದೇ ? ಏನೋ ಒಬ್ಬ ಬಡ ಯಹೂದಿ ಒಂದು ಪಂಚಾಂಗ ಜಾಸ್ತಿ ಮಾರಿದ ಮಾತ್ರಕ್ಕೆ ಇಷ್ಟು ಅಲ್ಲೋಲಕಲ್ಲೋಲ! ! ಇನ್ನೂ ಜೋರಾಗಿ ಓಡಿದರೆ? ಪೋಲೀಸರನ್ನೂ ಕರೆಯಬಹುದು. ಹಾಗೇ ನಿಂತರೂ ಕಷ್ಟವೇ ! ಅಷ್ಟರಲ್ಲಿ ಯಾರೋ ನನ್ನ ಕೈ ಹಿಡಿದುಕೊಂಡರು. ಆ ಸೇನಾಪತೀನೇ ಇರಬೇಕು ! ತಿರುಗಿ ನೋಡಿದರೆ ಅವನಲ್ಲ. ಕೆಫೆಯಲ್ಲಿ ಕೆಲಸಮಾಡುವ ಸೇವಕ ! ಬೆವರ್ತಾ ಇದ್ದಾನೆ . “ ಅಲ್ಲಯ್ಯ ! ಯಾಕೆ ಈ ತರಹ ಓಡ್ತಾ ಇದ್ದೀಯ. ಆ ಸೇನಾಪತಿ ನಿನ್ನ ನೋಡಬೇಕಂತೆ”

ಯಾವ ಸೇನಾಪತಿ? ಅವನಿಗೆ ನಾನೇ ಬೇಕು ಅಂತ ನಿನಗೆ ಹೇಗೆ ಗೊತ್ತು?”

ಏನದರ ಅರ್ಥ? ನನಗೇನು ಕಿವಿ ಇಲ್ಲವಾ? ಸೇನಾಪತಿ ಹೇಳಿದ್ದು ನನಗೆ ಕೇಳಿಸಲಿಲ್ಲವಾ? “ ಅಲ್ಲಿ ಹೋಗ್ತಾ ಇದ್ದಾನೆ ನೋಡು. ಪಂಚಾಗ ಮಾರ್ತಾ ಇರೋ ಯಹೂದಿ ! ಅವನ್ನ ಹಿಡುಕೊಂಡು ಇಲ್ಲಿಗೆ ಕರಕೊಂಡು ಬಾ” ಅಂದ

ತಕ್ಷಣ ಏನೋ ಯೋಚನೆ ಬಂತು ನೋಡಿ , ಅವನಿಗೆ ಹೇಳಿದೆ “ ಆ ಸೇನಾಪತಿ ಕಳಿಸಿದಾನೆ ಅಂತ ಮೊದಲೇ ನೀನು ಹೇಳಬೇಕಿತ್ತು ! ವಿಚಿತ್ರಾನಪ್ಪ ಅವನು ! ಈ ಪಂಚಾಂಗಕ್ಕೆ ಬೆಳಿಗ್ಗೆಯಿಂದ ಚೌಕಾಶಿ ಮಾಡ್ತಾ ಇದ್ದಾನೆ 1 ಇದು ಒಂದು ರೂಬಲ್ ಅಂತ ಹೇಳಿದರೆ ಅರ್ಧ ಕೊಡ್ತೀನಿ ಅಂತಾನೆ. ಸ್ವಲ್ಪ ಕಡಿಮೆ ಮಾಡೋಕೆ ತಯಾರಿದ್ದೆ, ಅದರೆ ಅರ್ಧ ರೂಬಲ್ , ಅರ್ಧ ರೂಬಲ್ ಅಂತ ಗಲಾಟೆ ಮಾಡ್ತಾ ಇದ್ದಾನೆ. ಏನು ಮಾಡೋಣ ಬಿಡು ! ಬಗ್ಗಬೇಕು ! ಅಧಿಕಾರ ಇರೋವರಲ್ವಾ? ತೊಗೊ, ಅರ್ಧ ರೂಬಲ್ ಕೊಡು. ಓಡಿ ಹೋಗಿ ಅವನಿಗೆ ಪಂಚಾಂಗ ಕೊಟ್ಟು ಅವನ ಹತ್ತಿರ ದುಡ್ಡು ಇಸ್ಕೊ “

ಈವತ್ತಿಗೂ ಆ ಎರಡನೆಯ ಸೇನಾಪತಿ ಯಾರು ಅಂತ ತಿಳಿದಿಲ್ಲ. ಮೊದಲನೇವನೇ ಇರಬೇಕು ಅಂತ ಕಾಣಿಸುತ್ತೆ. ಏಕೆಂದರೆ ಬಡ ಯಹೂದಿ ಪತ್ರಿಕಾ ಮಾರಾಟಗಾರರ ಮೇಲೆ ಸರ್ಕಾರ ಏಕೆ ಅಷ್ಟು ಕೋಪ ತೋರಿಸ್ಬೇಕು. ಈಗ ನಮ್ಮ ಮೊಹಲ್ಲನಲ್ಲಿ ಯಾರೂ ಯಹೂದಿ ಪಂಚಾಂಗಗಳನ್ನು , ಪತ್ರಿಕೆಗಳನ್ನ ಮಾರೋಕೆ ಆಗೋದೇ ಇಲ್ಲ.;ಮಾರಲೇ ಬೇಕಾದರೆ ಮುಚ್ಚಿಮುಚ್ಚಿ ಮಾಡಬೇಕು. ಅದಕ್ಕೇ ನಾನು ಈ ಪೋಲಿ ಪುಸ್ತಕಗಳನ್ನು ಮಾರಬೇಕಾಗಿ ಬಂದಿದೆ. ನನಗೆ ಗೊತ್ತು ಇದು ಒಳ್ಳೆದಲ್ಲ ಅಂತ ! ಆದರೆ ಏನು ಮಾಡೋದು ಯಹೂದಿಯೂ ಬದುಕಬೇಕಲ್ಲವೆ? ಮನೇಲಿ ಹಸಿದು ಕುಳಿತಿರುವ ಮಕ್ಕಳಿಗೆ ಏನು ಕೊಡೋಣ? ದೇವರು ನನ್ನನು ಕ್ಷಮಿಸಲಿ ಎಂದು ಕೋರುತ್ತೇನೆ. ಪ್ರತಿದಿನ ಆ ಸೇನಾಪತೀನ ನಾನು ಬಯ್ಕೊತೀನಿ. ಏನುಮಾಡೋದು ನಾವು ಕೇಳಿಕಂಡುಬಂದಿದ್ದು. ಅದಿರಲಿ, ಈ ತಿಂಗಳ ‘ರತಿರಹಸ್ಯ’ ಬಂದಿದೆ, ಕೊಡಲೆ ? (ಖ್ಯಾತ ಯಹೂದಿ ಲೇಖಕ ಶಲೋಮ್ ಅಲೆಖೆಮ್ (Sholem Aleichem ( 1859 – 1916), ಅವರ ಒಂದು ಕಥೆಯ ಭಾವಾನುವಾದ)







Comments

Popular posts from this blog

ಅನೇಕ ಹಳೆಯ ಲೇಖನಗಳು (೨೦೧೨-) ಪಾಲಹಌ ವಿಶ್ವನಾಥ್ Palahalli Vishwanath

ಆಸ್ಕರ್ ಶಿಂಡ್ಲರ್ – ಸಂತನಾದ ಸ್ವಾರ್ಥಿ - ಪಾಲಹಳ್ಳಿ ವಿಶ್ವನಾಥ್ Palahalli Vishwanath