ಕಾರ್ನ್ ಫ್ಲೇಕ್ಸ್ ಮತ್ತು ನಾನು palahalli Vishwanath
ಕಾರ್ನ್ ಫ್ಲೇಕ್ಸ್ ಮತ್ತು ನಾನು
ನಾನು ಮೊದಲು ಈ ‘ತಿಂಡಿ’ ಯನ್ನು ನೋಡಿದ್ದು ಗುಂತಕಲ್
ರೈಲ್ವೆ ಸ್ಟೇಷನ್ನಿನಲ್ಲಿ. 1950ರ ದಶಕದಲ್ಲಿ ಮುಂಬಯಿಗೆ ಹೋಗಲು
ನೇರ ರೈಲುಗಳು ಇರುತ್ತಿರಲಿಲ್ಲ.
ಗುಂತಕಲ್ ಅಥವಾ ಪೂನಾದಲ್ಲಿ
ರೈಲು ಬದಲಾಯಿಸಬೇಕಿತ್ತು. ಆಗಿನ್ನೂ ನನಗೆ 14-15ರ ವಯಸ್ಸು. ಒಂದು ಬಾರಿ ಗುಂತಕಲ್ನಲ್ಲಿ ಬಹಳ ಹೊತ್ತು ಮದರಾಸಿನಿಂದ ಬರುವ ರೈಲಿಗೆ ಕಾಯಬಬೇಕಾಯಿತು. ಆಗ ನಮ್ಮ ದೂರದ
ಸಂಬಂಧಿಯೊಬ್ಬರೂ ಮುಂಬಯಿಗೆ ಹೋಗುತ್ತಿದ್ದು ಪ್ಲಾಟ್ಪಾರಮ್ಮಿನಲ್ಲಿ ನನ್ನನ್ನು ನೋಡಿದರು. ಆಗ ತಾನೇ ಬೆಳಿಗ್ಗೆಯಾಗುತ್ತಿದ್ದರೂ ಅವರು ಟೈ ಕಟ್ಟಿಕೊಂಡಿದ್ದು ಅವರು ಎಲ್ಲೋ ದೊಡ್ಡ ಆಫೀಸರಾಗಿದ್ದರು ಎಂದು ನೆನಪಿಗೆ ಬಂದಿತು. ‘ ಬಾ ಬ್ರೇಕ್ ಫಾಸ್ಟ್ ಮಾಡೋಣ’ ಎಂದು ರೈಲ್ವೆ ಕೆಫೆಟೀರಿಯ ಒಳಗೆ ಕರೆದುಕೊಂಡು ಹೋದರು.
ಆಗೆಲ್ಲಾ ಅದು ಮೊದಲನೆಯ ದರ್ಜೆಯವರಿಗೆ ಮಾತ್ರ ಮೀಸಲಾಗಿತ್ತು ಎಂದು ಕಾಣುತ್ತದೆ. ‘ಏನಾದರೂ ತಿನ್ನು’ ಎಂದರು. ನಾನು ಮನೆಯಿಂದ ತಂದಿದ್ದ ಚಪಾತಿ ತಿಂದಿದ್ದು ಏನೂ ಬೇಡ ಎಂದು ತಲೆ ಅಲ್ಲಾಡಿಸಿದೆ. ‘ಸರಿ, ಕಾಫಿಯಾದರೂ ಕುಡಿ , ನಾನು ಬ್ರೇಕ್ಫಾಸ್ಟ್ ಮಾಡ್ತೀನಿ ‘ಎಂದರು. ಅವರು ಬರೇ ಇಂಗ್ಲಿಷಿನಲ್ಲೆ
ಮಾತಾಡುತಿದ್ದರು. ನಾನೋ ಆಗ ತಾನೆ
ಮಾತಾಡಲು ಕಲಿಯುತ್ತಿದ್ದೆ, ಅದೂ ಜೊತೆಯ ವಿದ್ಯಾರ್ಥಿಗಳೊಂದಿಗೆ ಮಾತ್ರ. ಆಮೇಲೆ ವೈಟರನ್ನು ಕರೆದರು. ಆತ ಯೂನಿಫಾರಮ ಧರಿಸಿದ್ದ - – ಎಲ್ಲಾ ಬಿಳಿಯ ಬಟ್ಟೆ, ತಲೆಯ ಮೇಲೆ ರುಮಾಲು ; ಹಿಂದೆ ಕಂಟೋನ್ಮೆಂಟಿನಲ್ಲಿ
ಒಂದು ಹೋಟೆಲಿನಲ್ಲಿ
ಇಂತಹ ವಸ್ತ್ರಧಾರಿಗಳನ್ನು ನೋಡಿದ್ದೆ. ಅವನಿಗೆ
ಇಂಗ್ಲಿಷಿನಲ್ಲಿ ಏನೋ ಹೇಳಿದರು. ಅವನು ತಲೆ ಅಲ್ಲಾಡಿಸಿದನ್ನು ‘ನೋಡಿ. ಪರವಾಯಿಲ್ಲ, ಇಂಗ್ಲಿಷ್ ಬರುತ್ತಲ್ಲಾ ‘ ಎಂದು ಆಶ್ಚರ್ಯವಾಯಿತು. ಸ್ವಲ್ಪ ಸಮಯದ ನಂತರ ಮತ್ತೊಬ್ಬ ಶ್ವೇತಧಾರಿ ವೈಟರ್ ಬಿಳೀ
ಪಿಂಗಾಣಿಯ
ದೊಡ್ಡ ತಟ್ಟೆಯನ್ನು ತಂದಿಟ್ಟ. ತಟ್ಟೆ ಸಮನಾಗಿರದೆ ಮಧ್ಯದಲ್ಲಿ
ಅಳವಾಗಿತ್ತು.
ಕೇಳಿದಾಗ ಅವರು ಇದು ‘ಬೌಲ್’ ಎಂದರು.’ಬೌಲ್’ ಎಂದು ಮನಸ್ಸಿನಲ್ಲೇ ಉಚ್ಚರಿಸಿಕೊಂಡೆ. ಇದಾದ ಮೇಲೆ ಮತ್ತೊಬ್ಬ ವೈಟರ್ ಒಂದು ಕಪ್ಪಿನಲ್ಲಿ ಹಾಲು ಮತ್ತು ಇನ್ನೊಂದು’ ಬೌಲ್’ನಲ್ಲಿ ಹಳದಿ ಬಣ್ಣದ ಚಕ್ಕೆ ಚಕ್ಕೆಗಳನ್ನು ತಂದಿಟ್ಟ.
ನಾನು ಅದನ್ನೆ ಕಣ್ಣಲ್ಲಿ ಕಣ್ಣಿಟ್ಟುನೋಡುತ್ತಿದ್ದನ್ನು
ಗಮನಿಸಿದ ಆ ಹಿರಿಯರು ‘ ಇದರ ಹೆಸರು ಕಾರ್ನ್ ಫ್ಲೇಕ್ಸ್…ರುಚಿ ನೋಡ್ತೀಯಾ ‘ ಎಂದಾಗ ಅದರಲ್ಲಿ ಏನಿದೆಯೋ ಏನೋ ಎಂದು ಹೆದರಿಕೊಂಡು ‘ಇಲ್ಲ’ ಎಂದು ‘ಕಾರ್ನ್ ಫ್ಲೇಕ್ಸ’ ಎಂಬ ಹೆಸರನ್ನು ಮನಸ್ಸಿನಲ್ಲೆ ಹೇಳಿಕೊಂಡೆ. ಕಾರ್ನ್ ಎಂದರೆ ಜೋಳ ಎನ್ನುವುದು ಮಾತ್ರ ಗೊತ್ತಿತ್ತು.ಆದರೆ ಅದಕ್ಕೆ ಏನೂ ಹಾಕಿರ್ತಾರೋ? ಆ ಹಿರಿಯರು ಆ ಚಕ್ಕೆಗಳ ಮೆಲೆ ಬಿಸಿ ಹಾಲು ಹಾಕಿಕೊಂಡು ಚಪ್ಪರಿಸಿಕೊಂಡು ತಿಂದರು. ಇದು ಇಂಗ್ಲಿಷಿನವರ ಬ್ರೆಕ್
ಫಾಸ್ಟ್ ಎಂದು ಏನೋ ವಿವರಣೆ ಕೊಟ್ಟರು . ಹೂ, ಹೂ ಎಂದೆನೇ ಹೊರತು ಅವರು ಹೇಳಿದ್ದು ಏನೂ ಗೊತ್ತಾಗಲಿಲ್ಲ.
ರೈಲು ಬಂತು ಅವರು ಬೈ ಹೇಳುತ್ತಾ ಮೊದಲನೆಯ ದರ್ಜೆಯ ಡಬ್ಬ ಹತ್ತಿದರು.
ಹಲವಾರು ವರ್ಷಗಳ ನಂತರ ನಾನು 1960ರ ದಶಕದಲ್ಲಿ ಮುಂಬಯಿಯಲ್ಲಿ ಒಂದು ಸಂಶೋಧನಾಲಯದಲ್ಲಿ ಕೆಲಸ ಮಾಡಲು
ಶುರುಮಾಡಿದೆ. ಆಗಾಗ್ಗೆ ಅಲ್ಲಿ ಯ
ಕ್ಯಾಂಟೀನಿನಲ್ಲಿ ಬೆಳಿಗ್ಗೆ ತಿಂಡಿಗೆ ಹೋಗುತ್ತಿದ್ದೆ. ಅಲ್ಲಿ ಮತ್ತ ಕಾರ್ನಫ್ಲೇಕ್ಸ್ ಕಾಣಿಸಿತು. ಈ ಬಾರಿ ಸ್ಲಲ್ಪ ಇಂಗ್ಲಿಷು ಕಲಿತಿದ್ದರಿಂದ ಈ ಇಂಗ್ಲಿಷ್ ತಿಂಡಿಯನ್ನು
ರುಚಿನೋಡಲು ಅರ್ಹತೆಯನ್ನೂ ಗಳಿಸಿದ್ದೆ ಎನಿಸಿತು. ಆದ್ದರಿಂದ ಯಾವ ಹಿಂಜರಿಕೆಯೂ ಇಲ್ಲದೆ
ಕಾರ್ನ್ಫ್ಲೆಕ್ಸನ್ನು ತಿನ್ನಲು ಶುರುಮಾಡಿದೆ. ಆಗಾಗ್ಗೆ ಸಂಶೋಧನೆಗಳಿಗೆ ನಾನು ಮುಂಬಯಿನಿಂದ ಕೆ.ಜಿ.ಎಫ್ ಗೆ ಹೋಗಬೇಕಾಗುತ್ತಿದ್ದು
ತಿಂಗಳುಗಟ್ಟಲೆ ಅಲ್ಲೇ
ಇರುತ್ತಿದ್ದೆ. ಆ ಊರಿನಲ್ಲಿ ನಮ್ಮ ಆಫೀಸು ಒಂದು ಮೆಸ್ ನಡೆಸುತ್ತಿದ್ದು ಅಲ್ಲಿ ನಮ್ಮ ಅಡಿಗೆಯವನ ಹೆಸರು ಸಿಂಗಾರುವೇಲು ಮೊದಲಿಯಾರ್.
ನಮಗಿಂತ ಬಹಳ ಹಿರಿಯ ವ್ಯಕ್ತಿ. ಅಲ್ಲಿ ಹಿಂದೆ
ಗಣಿಗಳಲ್ಲಿ ಇಂಗ್ಲಿಷಿನವರು ಕೆಲಸಮಾಡಿದ್ದು ಊರನ್ನು ‘ ಲಿಟಲ್ ಇಂಗ್ಲೆಂಡ್ ‘ ಎಂದು ಕರೆಯುತ್ತಿದ್ದರು. ಆದ್ದರಿಂದ ಊರಿನಲ್ಲಿ ಅವರು ಈಗ ಅಲ್ಲಿಲ್ಲದಿದ್ದರೂ
ಇಂಗ್ಲಿಷ್ ರೀತಿನೀತಿಗಳು ಇನ್ನೂ ಬಳಕೆಯಲ್ಲಿದ್ದವು. ಸಿಂಗಾರುವೇಲುವೂ ಅವರ ಜೊತೆ ಕೆಲಸ ಮಾಡಿದ್ದರಿಂದ ಅವರ ಮುಖ್ಯ ಕೆಲಸ ಅಡಿಗೆಯವರದ್ದಾದರೂ ನಾವು ಅವರನ್ನು ಬಟ್ಲರ್ ಎಂದು ಕರೆಯಬೇಕು ಎಂದು ನಮಗೆ ಸೂಚನೆ ದೊರಕಿತ್ತು. ನಾವೆಲ್ಲಾ ದೇಶದ ಬೇರೆ ಬೇರೆ
ಭಾಗಗಳಿಂದ ಬಂದಿದ್ದರಿಂದ ಇಂಗ್ಲಿಷಿನಲ್ಲಿ ಮಾತಾಡುತಿದ್ದೆವು. ಭಾರತೀಯರ ಮನೆಯಲ್ಲಿ ಕೆಲಸಮಾಡುವುದು ಸಿಂಗಾರುವೇಲು ಅವರಿಗೆ ಅಂತಸ್ತಿನಲ್ಲಿ ಕೆಳಗೆ ಹೋದಂತಿದ್ದರೂ ಇದರಿಂದ ಸ್ವಲ್ಪ ಸಮಾಧಾನವಿದ್ದು ನಮ್ಮ ಜೊತೆ ಇಂಗ್ಲಿಷಿನಲ್ಲೇ ಮಾತನಾಡುತ್ತಿದ್ದರು. ಅಂತೂ ಅವರ ಸಂಪರ್ಕದಿಂದ ನಮಗೆ ಬಟ್ಕರ್ ಇಂಗ್ಲಿಷ್ ಏನು ಎಂಬುದು ಅನುಭವಕ್ಕೆ ಬಂದಿತು. ಬೆಳಿಗ್ಗೆ ತಿಂಡಿಯ ವಿಷಯದಲ್ಲಿ ನಮಗೂ ಸಿಂಗಾರುವೇಲುವಿಗೂ ಆಗಾಗ್ಗೆ ಘರ್ಷಣೆ ಬರುತ್ತಿತು. ನಮ್ಮಲ್ಲಿ ಕೆಲವರಿಗೆ ಉಪ್ಪಿಟ್ಟು, ದೋಸೆ ಇತ್ಯಾದಿ ಇಷ್ಟವಿತ್ತು. ಅದರೆ ನಮ್ಮ ಬಟ್ಲರ್ ” ಆ ತಿಂಡಿಗಳು ನಿಮ್ಮಂತಹವರಿಗಲ್ಲ . ನೀವು ವಿಜ್ನಾನಿಗಳು, ಇಂಗ್ಲಿಷ್ ಮಾತಾಡುವವರು. ನೀವು
ಇದನ್ನೆಲ್ಲಾ ತಿನ್ನಬಾರದು.
ನೀವು ತಿನ್ನಬೇಕಾದ್ದು ಪಾರಿಜ್, ಆಮ್ಲೆಟ್, ಕಾರ್ನಫ್ಲೇಕ್ಸ್,ಕಟ್ಲೆಟ್ ಇತ್ಯಾದಿ” ಎಂದು ಹಿರಯರ ತರಹ ಹೇಳುತ್ತಲೇ ಇದ್ದರು. ಇಡ್ಲಿ, ದೋಸೆ ಬೇಕಾದವರು ಹತ್ತಿರದ ಹೋಟೆಲಿಗೆ ಹೋಗಬೇಕಾಗಿತ್ತು. ಇದರಿಂದಾಗಿ ಬೇಕಾಗಲಿ ಬೇಡವಾಗಲಿ ನಾವೆಲ್ಲ ಆಗಾಗ್ಗೆ ಕಾರ್ನ ಫ್ಲೇಕ್ಸ್ ತಿನ್ನಬೇಕಾಗಿ ಬಂದು ಅದು ರೂಢಿಯಾಗಿಬಿಟ್ಟಿತು !
ಇದಾದ ಕೆಲವು ವರ್ಷಗಳ ನಂತರ ನಾನು ಅಮೆರಿಕಕ್ಕೆ ಹೋದೆ. ಮೊದಲೆರಡು ದಿನ ಯಾರೋ ಪರಿಚಯಸ್ತರ ಮನೆಯಲ್ಲಿ ಉಳಿದುಕೊಂಡೆ.
ಜನವರಿಯ ಮೊದಲ ವಾರ. ಛಳಿಗಾಲ,ಅದೂ ಅಮೆರಿಕದ ಮಿಡ್ ವೆಸ್ಟ್. ನಡುಗುತ್ತ ಬೆಳಿಗ್ಗೆ ಎದ್ದಿದ್ದು ತಿಂಡಿಗೆ ಕುಳಿತೆವು. ಮನೆಯೊಡತಿ
“ಏನು
ತಿಂತೀರಿ’ ಎಂದು ಕೇಳಿದರು.ಅವರು ಭಾರತದಿಂದ ಬಹಳ
ಹಿಂದೆಯೇ ಬಂದು ನೆಲೆಸಿದ್ದರು. ಆದ್ದರಿಂದ ಅವರ ಅಮೆರಿಕದ ಲೇಪನೆಯಿದ್ದ ಇಂಗ್ಲಿಷನ್ನು ಅರ್ಥಮಾಡಿಕೊಳ್ಳುವುದು
ಕಷ್ಟವಾಯಿತು. ಏನು ಎಂದು ಎರಡು ಸತಿ ಕೇಳಬೇಕಾಯಿತು. ಕಡೆಗೆ ಅರ್ಥವಾದಾಗ ಧೈರ್ಯದಿಂದ ಜೋರಾಗಿ ‘ ಕಾರ್ನ್ ಫ್ಲೇಕ್ಸ್ ‘ ಅಂದೆ. ಅವರಿಗೂ ತಕ್ಷಣ ಅರ್ಥವಾಗಲಿಲ್ಲ ಎನಿಸುತ್ತದೆ. ತಡವಾಗಿ ಅವರು’ ಓಕೆ, ಓಕೆ ! ಕಾರ್ನ್ ಫ್ಲೇಕ್ಸಾ! ಬರೇ ಕಾರ್ನ್ ಫ್ಲೇಕ್ಸ ಯಾಕೆ? ಇಲ್ಲಿ ತರಾವರಿ ಸಿರಿಯಲ್
ಸಿಗುತ್ತೆ . ಸ್ಪೆಷ್ಲ್ ಕೆ ಇದೆ, ರೈಸ್ ಕ್ರಿಸ್ಪಿ ಇದೆ, ವೀಟೀ ಇದೆ..’ ಎಂದು ಹೇಳುತ್ತಾ ಹೋದರು. ಅವೆಲ್ಲಾ ಏನು ಎಂದು ಕೇಳುವ ಧೈರ್ಯಮಾಡದೆ ಮತ್ತೆ ‘ಕಾರ್ನ್ ಫ್ಲೇಕ್ಸ್’ ಎಂದೆ. ಅವರು ‘ ಆಯಿತು ! ಹೊಸ ದೇಶಕ್ಕೆ ಬಂದಾಗ
ಹೊಸದನ್ನು ಪ್ರಯತ್ನಿಸಬೇಕು.ನಾನು ಹೇಳ್ತೀನಿ ಅಂತ ಬೇಜಾರು ಮಾಡ್ಕೊಬೇಡಿ. ... ಸರಿ, ತೊಗೊಳಿ ‘ ಎಂದು ಒಂದು ಅಡುಗೆ ಮನೆಗೆ ಹೋಗಿ ಒಂದು ಕಾರ್ಡ್ಬೋರ್ಡ್ ಡಬ್ಬ ತಂದು ಮುಂದಿಟ್ಟರು. ನಾನು ಅದರ ವಾಸನೆ ನೋಡಿದ್ದು ಅವರಿಗೆ ಇಷ್ಟವಾಗಲಿಲ್ಲ. ಅದನ್ನು ನನ್ನ ಬೌಲಿಗೆ ಸುರಿದುಕೊಂಡು
ಹಾಲಿಗಾಗಿ ಹುಡುಕಿದೆ. ನನ್ನ ಪರೆದಾಟವನ್ನು ನೋಡಿದ ಅವರು ‘ಹಾಲು ಅಲ್ಲೆ ಇದೆಯಲ್ಲ’ ಎಂದರು. ಹೌದು, ಪಕ್ಕದಲ್ಲಿ ಹಾಲಿನ ಕಾರ್ಟನ್
ಇತ್ತು . ಮುಟ್ಟಿದೆ. ಕೊರೆಯುತ್ತಿತ್ತು. ‘ ಹಾಲು ತಣ್ಣಗಿದೆ ‘ಎಂದು ಅಂಜುತ್ತಾ ಹೇಳಿದೆ. ‘ ಈ ದೇಶದಲ್ಲಿ ಯಾರೂ ಸಿರಿಯಲ್ ಜೊತೆ ಬಿಸಿ ಹಾಲು
ತೊಗೋಳೋಲ್ಲ ‘ ಎಂದು ನನ್ನ್ನ ಕಡೆ ಕರುಣೆಮಿಶ್ರ್ಶ್ರಿತ ತಿರಸ್ಕಾರ
ದಿಂದ ನೋಡಿದರು ! ಹಾಗೇ ನಿಧಾನವಾಗಿ ತಣ್ಣನೆಯ ಹಾಲಿನ ಜೊತೆಯೆ ಕಾರ್ನ್ಫ್ಲೇಕ್ಸ್ ಮತ್ತು ಅದರ ‘ಕಸಿನ್ಸ್’ ಗಳಾದ ಇತರ ಸಿರಿಯಲ್ ಗಳೂ ಅಭ್ಯಾಸವಾದವು. ನನ್ನ ಎಷ್ಟೋ ಅಮರಿಕನ್ ವಿದ್ಯಾರ್ಥಿ ಮಿತ್ರರು ಹಸಿವಾದಾಗೆಲ್ಲ ಇದನ್ನು ತಿನ್ನುವುದನ್ನು ನೋಡಿ ನಾನೂ ಅನುಸರಿಸಲು ಶುರುಮಾಡಿದೆ. ಇದರಿಂದಾಗಿ ಸಸ್ಯಾಹಾರಿಯಾಗಿ ಬದುಕುವುದೂ ಸುಲಭವಾಯಿತು. ಭಾರತಕ್ಕೆ ವಾಪಸ್ಸುಬಂದಾಗ ಇಲ್ಲಿ ಬಿಸಿ ಹಾಲಿನ ಜೊತೆ ಕಾರ್ನ್ ಫ್ಲೇಕ್ಸ್ ತಿನ್ನುತ್ತಿರುವುದನ್ನು ನೋಡಿ ‘ ಪಾಪ, ಇನ್ನೂ ಕಲಿಯುವುದಿದೆ’ ಎನ್ನಿಸಿತು!
ಅಂತೂ ಈ ಎಲ್ಲ ಅನುಭವಗಳಿಂದ ದಶಕಗಳಿಂದ ಕಾರ್ನ್ ಫ್ಲೇಕ್ಸ್ ನಮ್ಮ ಬೆಳಗಿನ ಸಂಗಾತಿಯಾಗಿ ಬಿಟ್ಟಿದೆ. ಆದರೆ ಹಲ್ಲುಗಳು ಸವೆಯುತ್ತ ಬಿಸಿಹಾಲೇ ವಾಸಿ ಅನ್ನಿಸುತ್ತಿದೆ ! ಅದರ ಸಹವಾಸ ಮಾಡಿಸಿದ ದಶಕಗಳ ಹಿಂದಿನ ಗುಂತಕಲ್ಲಿನ ರೈಲ್ವೆ ಕ್ಯಾಂಟೀನಿನ ಆ ಬಿಳಿಯ ಪಿಂಗಾಣಿ ‘ ಬೌಲ್’ ನೆನಪಿನಿಂದ ಇಂದೂ ಸರಿದಿಲ್ಲ! ( ಪಾಲಹಳ್ಳಿ ವಿಶ್ವನಾಥ್)
Comments
Post a Comment